ಚಳಿಗಾಲದಲ್ಲಿ ಇರಲಿ ಆರೋಗ್ಯದ ಕಾಳಜಿ

ಉಪಯುಕ್ತ ಸಲಹೆ

ಸಾಮಾನ್ಯವಾಗಿ ಚಳಿಗಾಲದಲ್ಲಿ ನಮ್ಮ ಆರೋಗ್ಯ ತಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ಸೋಂಕುಗಳು ತಗಲುತ್ತವೆ. ಇದನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾದಷ್ಟು ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಈ ಕಾಲದಲ್ಲಿ ಬಹು ಬೇಗನೆ ಕೆಮ್ಮು ಹಾಗೂ ನೆಗಡಿಯಂತಹ ರೋಗಗಳು ಅಂದರೆ ವೈರಲ್ ಇನ್ಫೆಕ್ಷನ್ ಉಂಟಾಗುತ್ತದೆ. ಅಲ್ಲದೇ ಸಾಂಕ್ರಾಮಿಕ ರೋಗ ಸೇರಿದಂತೆ ವಿವಿಧ ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಬರಬಹುದಾದ ರೋಗಗಳು ಯಾವುವು ಹಾಗೂ ಅವುಗಳಿಂದ ಯಾವ ರೀತಿ ಸಂರಕ್ಷಣೆ ಪಡೆಯಬೇಕು. ಇದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ. ಚಳಿಗಾಲದಲ್ಲಿ ಯಾವ ರೀತಿ ಕ್ರಮ ವಹಿಸಬೇಕೆಂದರೆ ಮೊದಲನೇಯದಾಗಿ ನಿಮ್ಮ ರಕ್ತದಲ್ಲಿರುವ ಸಕ್ಕರೆ ಮತ್ತು ಕೊಲೆಸ್ಟರಾಲ್‌ ನ್ನು ನಿಯಂತ್ರಿಸಬೇಕು. ಚಳಿಗಾಲದಲ್ಲಿ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡಬೇಕು. ಏಕೆಂದರೆ ಹೆಚ್ಚಿನ ಉಪ್ಪು ಹೃದಯ ಖಾಯಿಲೆಗಳಿಗೆ ಅಪಾಯವನ್ನು ಹೆಚ್ಚಿಸುತ್ತದೆ.

ಎರಡನೇಯದಾಗಿ ಆಹಾರ ಪದ್ದತಿ. ಹೌದು ಧಾನ್ಯಗಳು, ಓಟ್ ಮೀಲ್ ಇತ್ಯಾದಿಗಳು ಹೃದಯದ ಅರೋಗ್ಯಕ್ಕೆ ಒಳ್ಳೆಯದು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹುರಿದ ಮತ್ತು ಸ್ಯಾಚುರೇಟೆಡ್ ಆಹಾರವನ್ನು ಸೇವಿಸಬಾರದು ಆದಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ. ಅವುಗಳಲ್ಲಿರುವ ಜೀವ ಸತ್ವಗಳು ಮತ್ತು ಖನಿಜಗಳು ಈ ಋತುವಿನಲ್ಲಿ ರೋಗಗಳ ವಿರುದ್ಧ ಹೋರಾಡಲು ಬಹಳ ಪ್ರಯೋಜನವಾಗಿದೆ. ಮೂರನೇಯದಾಗಿ ಕುಡಿಯುವ ನೀರಿನ ಅಭ್ಯಾಸ. ಚಳಿಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಹರ್ಬಲ್ ಟೀ ಕುಡಿಯುವುದರಿಂದ ಎಲ್ ಡಿಎಲ್ ಕೊಲೆಸ್ಟರಾಲ್‌ ಮತ್ತು ಟೈಡ್ಲಿಸರಾಯಿಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ನು ನಾಲ್ಕನೇಯದಾಗಿ ನಿಮ್ಮ ತೂಕವನ್ನು ನಿಯಂತ್ರಣ ದಲ್ಲಿಡಬೇಕು. ಸದೃಢವಾಗಿರಲು ನಿಯಮಿತವಾಗಿ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ವಾಕ್ ಮಾಡುವುದು ಕೂಡ ಉತ್ತಮವಾದ ವ್ಯಾಯಾಮ. ಅಲ್ಲದೇ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ.

ದಿನಕ್ಕೆ ಆರರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು.ಪ್ರತಿದಿನ ಕನಿಷ್ಠ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಡೆಯಬೇಕು. ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಐದನೇಯದಾಗಿ ಹೃದಯ ರೋಗಗಳನ್ನು ತಪ್ಪಿಸಲು ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಬೇಕು. ಸಾಧ್ಯವಾದಷ್ಟು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ವಿಶೇಷವಾಗಿ ಪಾದಗಳು ತಲೆ ಮತ್ತು ಕಿವಿಗಳಿಗೆ ಶೀತವಾಗದಂತೆ ಎಚ್ಚರ ವಹಿಸಬೇಕು. ಇದಲ್ಲದೇ ಬಿಸಿಯಾದ ಆಹಾರವನ್ನು ಸೇವಿಸಿದಾಗ ನಮ್ಮ ಆರೋಗ್ಯ ಉತ್ಯಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಐಸ್ ಕ್ರೀಂ ಸೇವನೆ ಹಾಗೂ ಫ್ರಿಜ್ ನಲ್ಲಿರುವ ತಣ್ಣನೆಯ ಪದಾರ್ಥಗಳ ಬಳಕೆ ಮಾಡಿದರೆ ನಮಗೆ ರೋಗಗಳು ಬಹುಬೇಗನೆ ಹರಡುತ್ತದೆ. ಕರಿದ ಪದಾರ್ಥಗಳ ಹೆಚ್ವಿನ ಸೇವನೆ ಕೂಡ ಚಳಿಗಾಲದಲ್ಲಿ ಕೆಮ್ಮು ಕಫದಂತಹ ರೋಗಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಮಕ್ಕಳಿಗೆ ಚಳಿಗಾಲದಲ್ಲಿ ಬಹಳ ಬೇಗನೆ ರೋಗಗಳು ಹರಡುತ್ತವೆ. ವಾತಾವರಣದ ಬದಲಾವಣೆ ಬಹುಬೇಗ ರೋಗಗಳಿಗೆ ಕಾರಣವಾಗುತ್ತದೆ. ನಿಯಮಿತ ಆಹಾರ ಸೇವನೆ ವ್ಯಾಯಾಮ ಹಾಗೂ ನಿತ್ಯ ಯೋಗ ಮಾಡುವುದರಿಂದ ನಮ್ಮ ದೇಹ ಫಿಟ್ ಅಂಡ್ ಫೈನ್ ಆಗಿರಲು ಸಾಧ್ಯ. ಆದ್ದರಿಂದ ನೀವು ಸಹ ನಿತ್ಯ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Leave a Reply

Your email address will not be published.